Monday, November 19, 2007

ಆದ್ಯ ರಂಗಾಚಾರ್ಯರು


ಆದ್ಯ ರಂಗಾಚಾರ್ಯರು
ರಂಗಭೂಮಿಯ ಇತಿಹಾಸದಲ್ಲಿ ಶ್ರೀರಂಗ ಎಂದೇ ಖ್ಯಾತರಾದ ಆದ್ಯ ರಂಗಾಚಾರ್ಯರು ಈ ಹೊತ್ತಿನಲ್ಲಿ ಮರೆವಿನ ಅಂಚಿಗೆ ಸರಿದರು ಎನ್ನುವಷ್ಟರಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಮಗ್ರ ಸಾಹಿತ್ಯವನ್ನು ಮರುಪ್ರಕಟಿಸಿದೆ.
ಕರ್ನಾಟಕದ ಸಾಂಸ್ಕೃತಿಕ ಬದುಕನ್ನು ಕಟ್ಟಿದ ಶ್ರೀರಂಗರ ನಾಟಕಗಳು, ಭಾರತೀಯ ರಂಗಭೂಮಿ ಕುರಿತ ಅವರ ಚಿಂತನೆಗಳ ಇತ್ಯಾದಿಗಳನ್ನು ಸೇರಿಸಿ ೧೪ ಸಂಪುಟಗಳನ್ನು ಇಲಾಖೆ ಹೊರತಂದಿದೆ. ವಿಮರ್ಶಕ ಡಾ. ಜಿ.ಎಸ್. ಅಮೂರ ಅವರು ಈ ಕೃತಿಗಳ ಸಂಪಾದಕರು.
ಪ್ರಸ್ತಾವನೆಯಲ್ಲಿ ಶ್ರೀರಂಗರ ಕುರಿತು ಜಿ.ಎಸ್. ಅಮೂರ ಅವರ ಹೇಳಿರುವ ಕೆಲ ಮಾತುಗಳು ಇಲ್ಲಿವೆ- ೧೯೩೦ರ ಸೆಪ್ಟಂಬರ್ ೨೦ರಂದು ಧಾರವಾಡದ ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದವರು ಉದರ ವೈರಾಗ್ಯ ಪ್ರದರ್ಶಿಸುವ ಮೂಲಕ ಶ್ರೀರಂಗರ ರಂಗಪ್ರವೇಶ ಆಯಿತು.
ಇದಕ್ಕೂ ಮೊದಲೇ ಶ್ರೀರಂಗರೇ ಗುರುತಿಸಿದಂತೆ ಟಿ.ಪಿ. ಕೈಲಾಸಂ ಅವರ ಟೊಳ್ಳುಗಟ್ಟಿ, ಹೋ ರೂಲು, ಮೊದಲಾದ ನಾಟಕಗಳು ಅಧುನಿಕ ಕನ್ನಡ ರಂಗಭೂಮಿ ಸ್ಥಾಪನೆಗೆ ದೃಢವಾದ ಬುನಾದಿ ಹಾಕಿದ್ದವು. ಆದರೆ, ಶ್ರೀರಂಗರ ಮಾರ್ಗ ಸುಲಭವಾಗಿ ಇರಲಿಲ್ಲ. ಮೊದಲನೆಯ ಕರ್ನಾಟಕ ನಾಟ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರೆಂದು ಮುದವೀಡು ಕೃಷ್ಣರಾಯರು ಮಾಡಿದ ಸುದೀರ್ಘ ಭಾಷಣಧ ಕೊನೆಗೆ ಅವರು ಈ ನಿಷ್ಕರ್ಷಕ್ಕೆ ಬಂದರು- ಈಗ ನಮ್ಮ ರಂಗಭೂಮಿಯ ಮೇಲೆ ಪ್ರಯೋಗಿಸಲ್ಪಡುತ್ತಿರುವ ನಾಟಕಗಳಲ್ಲಿ ನಾಟಕ್ಕೆ ಅಗತ್ಯವಾದ ಒಂದಾದರೂ ಗುಣವಿರುವುದೇ ಎಂದು ನಿರೀಕ್ಷಣೆ ಮಾಡಿದರೆ ಕಂಡುಬರುವುದೇನು? ಉಚ್ಛ ಆದರ್ಶವಿಲ್ಲ, ಉದಾತ್ತ ಭಾವನೆ ಇಲ್ಲ, ಸುಸಂಸ್ಕೃತ ವಿಚಾರಗಳಿಲ್ಲ, ಸಂವಿಧಾನಿಕ ಚಮತ್ಕೃತಿಯಿಲ್ಲ, ರಸಪರಿಪ್ರೆಷವಿಲ್ಲ, ಶುದ್ಧ ಭಾಷೆಯಿಲ್ಲ, ಭಾವೋದ್ದೀಪಕ ಅಭಿನಯವಿಲ್ಲ, ಚಿತ್ತಾಕರ್ಷಕ ಗಾಯನವಿಲ್ಲ, ಗಂಭೀರ ವೃತ್ತಿಯಿಲ್ಲ, ಸಾರಾಂಶ ಸುಸಂಸ್ಕೃತ ಮನಸ್ಸಿನವರು ನಾಟಕ ನೋಡಬೇಕು ಎಂಬ ಕುತೂಹಲವು ಮನಸ್ಸಿನಲ್ಲಿ ಹುಟ್ಟುವಂತ ಯಾವುದೊಂದು ಅಂಗವೂ ಅವುಗಳಲ್ಲಿ ಕಂಡು ಬರುವುದಿಲ್ಲ. ಈ ಪರಿಸ್ಥಿತಿ ಎದುರಿಸಿ ತಮ್ಮ ಪ್ರತಿಭೆ ಪರಿಶ್ರಮಗಳಿಂದ ಕನ್ನಡ ರಂಗಭೂಮಿಗೆ ರಾಷ್ಟ್ರೀಯ ಗೌರವ ತಂದುಕೊಟ್ಟ ಹಿರಿಯರಲ್ಲಿ ಶ್ರೀರಂಗರು ಅಗ್ರಮಾನ್ಯರು.
ಡಿ.ಎ. ಶಂಕರ ಹೇಳಿದ ಹಾಗೆ ಶ್ರೀರಂಗರನ್ನು ಕುರಿತು ಇಡೀ ಕರ್ನಾಟಕದ ಈ ಐವತ್ತು ವರ್ಷಗಳ ನಾಟಕ, ನಾಟಕ ಸಾಹಿತ್ಯ, ಚರಿತ್ರೆ ಹಾಗೂ ರಂಗಭೂಮಿಯ ಇತಿಹಾಸಗಳನ್ನು ಅವುಗಳ ಪ್ರಾರಂಭಿಕ ದಿನಗಳಿಂದ ಬರೆಯುವುದು ಎಂದೇ ಆಗುತ್ತದೆ. ನಮ್ಮ ನಾಟಕದ ಎಲ್ಲಾ ಮಗ್ಗುಲಗಳು, ಆಯಾಮಗಳು, ರಂಗತಂತ್ರಗಳು ಶ್ರೀರಂಗರ ಬರವಣಿಗೆ ಒಳಗಿನಿಂದಲೇ ಹುಟ್ಟಿ ಬಂದಿರುವಂಥವು- ಈ ಅರ್ಥದಲ್ಲಿ ಶ್ರೀರಂಗರು ನಮ್ಮ ನಾಟಕ ಪ್ರಪಂಚದ ನಿಜವಾದ ಆದ್ಯರು.
ಶ್ರೀರಂಗರು ಒಬ್ಬ ಪರಿಪೂರ್ಣ ರಂಗವ್ಯಕ್ತಿ. ಅವರು ಬರೆದ ಪೂರ್ಣಾವಧಿ ನಾಟಕಗಳ ಸಂಖ್ಯೆಯೆ ೪೫, ಇದಲ್ಲದೆ ಅರವತ್ತಕ್ಕೂ ಮೀರಿದಂತೆ ಕಿರು ನಾಟಕಗಳನ್ನು ಅವರು ಬರೆದಿದ್ದಾರೆ.
ತರಬೇತು ಪಡೆದ ನಿರ್ದೇಶಕರು ಇಲ್ಲದ ಕಾಲದಲ್ಲಿ ತಮ್ಮ ನಾಟಕಗಳನ್ನು ತಾವೇ ನಿರ್ದೇಶಿಸಿದರು. ನಟನ ಭೂಮಿಕೆಯಲ್ಲಿಯೂ ಕಾಣಿಸಿಕೊಂಡರು. ನಾಟ್ಯಸಂಘ, ಸಂಗೀತ ನಾಟಕ ಅಕಾಡೆಮಿ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಮೊದಲಾದ ಸಂಸ್ಥೆಗಳೊಂದಿಗೆ ನಿಕಟವಾದ ಸಂಬಂಧ ಇರಿಸಿಕೊಂಡಿದ್ದರು. ರಂಗ ತರಬೇತಿ ಕ್ಷೇತ್ರದಲ್ಲಿ ಸಕ್ರಿಯರಾಗಿ ದುಡಿದರು. ಧಾರವಾಡದ ಕನ್ನಡ ಅಮೆಚ್ಯೂರ್‍ಸ್ ಸಂಸ್ಥೆ ಅವರದೇ ಸೃಷ್ಟಿಯಾಗಿತ್ತು. ಭರತನ ನಾಟ್ಯಶಾಸ್ತ್ರವನ್ನು ಇಡಿಯಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಿದ್ದಲ್ಲದೆ ರಂಗಭೂಮಿಗೆ ಸಂಬಂಧಿಸಿದ ದಿ ಇಂಡಿಯನ್ ಥಿಯೇಟರ್, ರಂಗಭೂಮಿಯ ಪುರೋಭಿವೃದ್ಧಿ ಮೊದಲಾದ ಅನೇಕ ಗ್ರಂಥಗಳನ್ನು ಬರೆದರು.
ಸಂಸ್ಕೃತ ನಾಟಕಗಳನ್ನು ಕುರಿತು ಅವರು ಬರೆದ ಗ್ರಂಥಗಳಿಗೆ ವಿದ್ಯನ್ಮನ್ನಣೆ ದೊರಕಿತು- ಕಾಲಿದಾಸ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು. ನಾಟಕ ಹಾಗೂ ರಂಗಭೂಮಿ ಬಗ್ಗೆ ಅವರು ಚಿಂತಿಸಿದ ಪ್ರಮಾಣದಲ್ಲಿ ಬೇರೆ ಯಾರೂ ಚಿಂತಿಸಿರಲಾರರು. ಕಾದಂಬರಿ, ಪ್ರಬಂಧ, ವಿಮರ್ಶೆ, ಸಂಶೋಧನೆ ಇಂಥ ಹಲವಾರು ಕ್ಷೇತ್ರಗಳಲ್ಲಿ ಅವರ ಸಾಧನೆ ಇದೆ. ಆದರೆ, ಕರ್ನಾಟಕದ ಒಳಗೆ ಹಾಗೂ ಹೊರಗೆ ಅವಯರು ಒಬ್ಬ ಶ್ರೇಷ್ಠ ನಾಟಕಕಾರ ಹಾಗೂ ರಂಗಚಿಂತಕ ಎಂದೇ ಪ್ರಸಿದ್ಧರಾಗಿದ್ದಾರೆ.
ಅವರ ಕೆಲ ನಾಟಕಗಳ ಪರಿಚಯ ಮುಂದಿನ ಕಂತಿನಲ್ಲಿ....

ಶಿವಮೊಗ್ಗ ರಂಗಾಯಣದಿಂದ ಹೊರಟ ರಂಗತೇರು

ಶಿವಮೊಗ್ಗ :   ರಂಗಾಯಣ   ರೆಪರ್ಟರಿ ವತಿಯಿಂದ ಜೂ. 7 ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ರಂಗಾಯಣದ ರಂಗತೇರಿನ ರಂಗಪಯಣ ಆರಂಭ ಗೊಂಡಿದೆ. ರಂಗಾಯಣ ನಿರ್ದೇಶಕ ಡಾ.ಎಂ.ಗಣ...