Monday, May 14, 2007

ಕೋಡು ಇಲ್ಲದ ಹೆಗ್ಗೋಡು- ಕೆ।ವಿ. ಸುಬ್ಬಣ್ಣ ನೆನಪು


ಕೋಡು ಇಲ್ಲದ ಹೆಗ್ಗೋಡು- ಕೆ।ವಿ. ಸುಬ್ಬಣ್ಣ ನೆನಪು
ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿ ಅತುಲ್ ತಿವಾರಿ ಒಂದು ಲೇಖನದಲ್ಲಿ ಹೀಗೆ ಹೇಳುತ್ತಾರೆ- ೧೯೮೦ರಲ್ಲಿ ನನಗೆ ಕೆ।ವಿ. ಅಕ್ಷರ ದೆಹಲಿಯ ಎನ್‌ಎಸ್‌ಡಿಯಲ್ಲಿ ಸಹಪಾಠಿ. ಅವರೊಂದಿಗೆ ನಾವೆಲ್ಲಾ ಸುಬ್ಬಣ್ಣ ಅವರನ್ನು ನೋಡಲು ಹೆಗ್ಗೋಡಿಗೆ ಹೊರಟೆವು. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ, ಶಿವಮೊಗ್ಗದಿಂದ ಸಾಗರಕ್ಕೆ ಬಸ್ಸಿನಲ್ಲಿ, ಸಾಗರದಿಂದ ಹೆಗ್ಗೋಡಿಗೆ ಎತ್ತಿನಗಾಡಿಯಲ್ಲಿ ಹೋದೆವು- He brought the world to his village

ಹೌದು, ನೀನಾಸಂನಲ್ಲಿ ಕೆ.ವಿ. ಸುಬ್ಬಣ್ಣ ಮಾಡಿದ ಮಾಂತ್ರಿಕತೆ ಇದು. ಇಡೀ ವಿಶ್ವವೇ ಒಂದು ಹಳ್ಳಿ ಎಂಬ ಹವಾ ಎಲ್ಲಡೆ ಹಬ್ಬಿದ ವೇಳೆಯಲ್ಲಿ ಸುಬ್ಬಣ್ಣ ಹೆಗ್ಗೋಡೇ ಒಂದು ವಿಶ್ವ ಎಂದರು.
ಸುಬ್ಬಣ್ಣ ಅವರಿಗೆ ಹೆಗ್ಗೋಡು ಗೋಕುಲವಾಗಿತ್ತು. ಅವರ ಗೋಕುಲ ನಿರ್ಗಮನಕ್ಕೆ ಇಂದಿಗೆ ಒಂದು ವರ್ಷ.
ಹೆಗ್ಗೋಡಿನ ಕೋಡು ಎಂದೇ ಬಣ್ಣಿತವಾಗಿದ್ದ ಸುಬ್ಬಣ್ಣ ಇಲ್ಲದ ನೀನಾಸಂ ಹೇಗಿರುತ್ತೇ...ಎಂಬ ಪ್ರಶ್ನೆ ಅಂದು ಸಾಂಸ್ಕೃತಿಕ ವಲಯದಲ್ಲಿ ಬಹುಮುಖ್ಯ ಚರ್ಚೆಯ ವಿಷಯವಾಗಿತ್ತು.
ಇಂದಿಗೂ ನೀನಾಸಂ ಚೈತನ್ಯಶೀಲವಾಗಿ, ಜೀವಂತಿಕೆಯಿಂದ ಇದೆ. ಸುಬ್ಬಣ್ಣ ದೈಹಿಕವಾಗಿ ಇಲ್ಲ. ಆದರೆ, ನೆನಪುಗಳೊಂದಿಗೆ ಇದ್ದಾರೆ. ಅವರು ಇದ್ದಾಗ ಹೇಗೆ ಕೆಲಸ ಮಾಡುತ್ತಿದ್ದೇವೋ ಈಗಲೂ ಹಾಗೇ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಕೆ.ವಿ. ಅಕ್ಷರ.
ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ಅವರೊಂದಿಗೆ ಕೆಲಸ ಮಾಡಿದ ಅನುಭವ ನೀನಾಸಂ ಬಳಗಕ್ಕೆ ಇದೆ. ಈ ಅನುಭವವೇ ನೀನಾಸಂನ ಮುಂದಿನ ದಾರಿ ‘ಹೂ ಚೆಲ್ಲಿದ ಹಾದಿ’ ಕೂಡ.
ನೀನಾಸಂ, ಚಿತ್ರಸಮಾಜ, ಅಕ್ಷರ ಪ್ರಕಾಶ, ತಿರುಗಾಟ ಮತ್ತು ಇದನ್ನೆಲ್ಲಾ ಒಳಗೊಂಡ ಪುಟ್ಟ ಪ್ರಪಂಚ ಹೆಗ್ಗೋಡಿನ ಗ್ರಾಮೀಣ ಸಮುದಾಯದ ದೀಪ ಆರಿದೆ. ಆದರೆ, ಬೆಳಕು ಉಳಿದಿದೆ.
ಆಯಾ ಕ್ಷಣದಲ್ಲಿ ಏನು ಮಾಡಬೇಕೋ ಅದನ್ನೇ ಮಾಡಬೇಕು. ಜೀವಂತಿಕೆಯಿಂದ ಬದುಕಬೇಕು. ಪ್ರತಿ ಹೊಸ ಕ್ಷಣಕ್ಕೆ ತೆರೆದುಕೊಳ್ಳುವ ಜೀವಂತಿಕೆ ಉಳಿಸಿಕೊಳ್ಳಬೇಕು. ಎಲ್ಲಕ್ಕಿಂತ ಬದುಕು ದೊಡ್ಡದು ಎಂಬ ಸುಬ್ಬಣ್ಣ ಅವರ ಜೀವನ ಶೈಲಿ ಇಲ್ಲಿನ ಜಗತ್ತನ್ನು ಜೀವಂತವಾಗಿಟ್ಟಿದೆ.
ರಾಜಕೀಯ ಕ್ಷೇತ್ರದಲ್ಲಿ ವಿಫಲ ಎನ್ನುವ ಆದರ್ಶಗಳೆಲ್ಲವೂ ಸುಬ್ಬಣ ಅವರ ಹೆಗ್ಗೋಡಿನಲ್ಲಿ ಸಜೀವವಾಗಿ ಉಳಿದವು. ಮುಖ್ಯವಾಗಿ ಕೃಷಿಕರಾಗಿ, ರಂಗಕರ್ಮಿಯಾಗಿ, ಲೇಖಕರಾಗಿ, ಪರಿಸರ ಹೋರಾಟಗಾರರಾಗಿ, ಚಿಂತಕರಾಗಿ- ಹೀಗೆ ದಶರೂಪದ ಸುಬ್ಬಣ್ಣ ಅವರ ಬದುಕೇ ಒಂದು ಪಾಠ.
ಪ್ರತಿಯೊಬ್ಬನ ಬದುಕೂ ಆಂತರಿಕವಾಗಿ ಶ್ರೀಮಂತವಾದಾಗ ಒಂದು ಸಾಂಸ್ಕೃತಿಕ ಸೌಂದರ್ಯ ನಿರ್ಮಾಣವಾಗುತ್ತದೆ.
ಈ ಚಿಂತನೆಯಡಿ ತಾವು ಬದುಕುವ ಕ್ಷೇತ್ರದ ಕ್ರಮವನ್ನೇ ಬದಲಿಸಿ, ಒಂದು ಸಮುದಾಯದ ಬದುಕಿಗೆ ವಿಶೇಷ ಹೊಳಪು ತಂದವರು ಸುಬ್ಬಣ್ಣ. ಅಷ್ಟೇ ಅಲ್ಲ- ಈ ಹೊಳಪು ಉಳಿಯುವಂತೆ ಸಮುದಾಯವನ್ನು ರೂಪಿಸಿದ ಚೇತನ.
ನೀನಾಸಂ, ಚಿತ್ರಸಮಾಜ, ಅಕ್ಷರ ಪ್ರಕಾಶ, ತಿರುಗಾಟ ಮತ್ತು ಇದನ್ನೆಲ್ಲಾ ಒಳಗೊಂಡ ಹೆಗ್ಗೋಡಿನ ಗ್ರಾಮೀಣ ಸಮುದಾಯದಲ್ಲಿ ಸುಬ್ಬಣ್ಣ ಅವರ ನೆನಪು ಹಾಸುಹೊಕ್ಕಾಗಿದೆ. ಮಳೆ ನಿಂತರೂ ಹನಿ ನಿಲ್ಲದಂತೆ, ಬೆಳಕು ಆರಿದರೂ ಪ್ರಕಾಶ ಉಳಿದಂತೆ. ನಮ್ಮ ನಡುವಿನ ತವಕ- ತಲ್ಲಣಗಳಿಗೆ ತುಸು ತಂಪೆರೆವ ತಾಣವಾಗಿದೆ- ಹೆಗ್ಗೋಡಿನ ಈ ಪುಟ್ಟ ಜಗತ್ತು.


ಓದು
ಕೆ.ವಿ. ಸುಬ್ಬಣ್ಣ ಅವರ ಸ್ಮರಣೆಗಾಗಿ ಅಕ್ಷರ ಪ್ರಕಾಶನ ಹಮ್ಮಿಕೊಂಡಿರುವ ವಿನೂತನ ಯೋಜನೆ ‘ಮೊದಲ ಓದು’
ಎಲ್ಲವೂ ಸಮಗ್ರವಾಗಿ ಸಿಗುತ್ತಿರುವ, ಸಿಗಬೇಕು ಎಂಬ ಮನಸ್ಥಿತಿ ನಿರ್ಮಾಣವಾಗಿರುವ ಇಂದಿನ ಹೊತ್ತಿನಲ್ಲಿ ಕನ್ನಡ ಸಾಹಿತ್ಯಕ್ಕೆ ಪ್ರವೇಶ ಕಲ್ಪಿಸುವ ಉದ್ದೇಶ ಈ ಮಾಲಿಕೆಯದ್ದು.
ಕನ್ನಡ ಸಾಹಿತ್ಯವನ್ನು ಮೊದಲಿಗೆ ಓದುವವರಿಗಾಗಿ ಈ ಮಾಲಿಕೆಯ ಕೃತಿಗಳು ಉತ್ತಮ ತಳಹದಿಯಾಗುವ ನಿರೀಕ್ಷೆ ಇದೆ.
‘ಮೊದಲ ಓದು’ ಮಾಲಿಕೆಯಲ್ಲಿ ೨೫ ಪುಸ್ತಕಗಳು ಹೊರಬರಲಿವೆ. ಇದರಲ್ಲಿ ೫ ಹಳೆಗನ್ನಡ ಕೃತಿಗಳು. ಕನ್ನಡದ ಮುಖ್ಯ ಕವಿಗಳ ಕವಿತೆಗಳು, ಮುಖ್ಯ ಕತೆಗಾರರ ಕತೆಗಳು, ಪ್ರಬಂಧಗಳು, ಲೇಖನಗಳು, ನಾಟಕಗಳು ಹೀಗೆ ವೈವಿಧ್ಯಮಯ ಪ್ರಕಾರದ ಪುಸ್ತಕಗಳು ಅಕ್ಟೋಬರ್‌ನಲ್ಲಿ ಓದುಗರ ಕೈ ಸೇರಲಿವೆ.

2 comments:

veena said...

ಉತ್ತಮ ಮಾಹಿತಿ ಇದೆ

shivu.k said...

ಹೆಗ್ಗೋಡು ಹಾಗು ಸುಬ್ಬಣ್ಣರವರ ಬಗ್ಗೆ ಬರೆದದ್ದು ನಾನು ೧೦ ವರ್ಷಗಳ ಹಿಂದೆ ನಮ್ಮದೇ ಒಂದು ಸುಪ್ತ ನಾಟಕವಾಡುವ ತಂಡ ಕಟ್ಟಿಕೊಂಡು[ಅದರಲ್ಲಿ ಇಂದಿನ ಸಿನಿಮಾ ಹಾಡು ಬರಹಗಾರ ನಾಗೇಂದ್ರಪ್ರಸಾದ್ ಸೇರಿದಂತೆ]ಹೆಗ್ಗೋಡಿಗೆ ಹೋಗಿದ್ದೆವು. ನಾಟಕವಾಡಲಿಕ್ಕಲ್ಲ. ಅಲ್ಲಿನ ಶಿಬಿರ ಸಂಸ್ಕೃತಿ ತಿಳಿಯಲು. ಆಗ ಸುಬ್ಬಣ್ಣ ಇದ್ದರು ಜೊತೆಯಲ್ಲಿ ಅನಂತಮೂರ್ತಿ ಇದ್ದರು. ಆ ಅನುಭವವೇ ಮರೆಯಾಗದ್ದು. ಇದನ್ನು ಅದೆಲ್ಲಾ ನೆನಪಾಯಿತು. ನಂತರ ನಾಟಕ ಬೇಡವೆನಿಸಿ ಛಾಯಾಗ್ರಾಹಕನಾದೆ. ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನ ಬ್ಲಾಗಿಗೊಮ್ಮೆ ಬನ್ನಿ. ನಿಮಗೆ ಖುಷಿ ತರುವ ಛಾಯಾಚಿತ್ರಗಳು, ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು.

ನನ್ನ ಬ್ಲಾಗ್ ವಿಳಾಸ:

http://chaayakannadi.blogspot.com

ಶಿವಮೊಗ್ಗ ರಂಗಾಯಣದಿಂದ ಹೊರಟ ರಂಗತೇರು

ಶಿವಮೊಗ್ಗ :   ರಂಗಾಯಣ   ರೆಪರ್ಟರಿ ವತಿಯಿಂದ ಜೂ. 7 ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ರಂಗಾಯಣದ ರಂಗತೇರಿನ ರಂಗಪಯಣ ಆರಂಭ ಗೊಂಡಿದೆ. ರಂಗಾಯಣ ನಿರ್ದೇಶಕ ಡಾ.ಎಂ.ಗಣ...