Monday, May 14, 2007

ಗುಬ್ಬಿವೀರಣ್ಣ ಭಾರತ ರಂಗಮಹೋತ್ಸವ

ಮಾರ್ಗ ತೋರಿದ ರಂಗಮಹೋತ್ಸವ
ಬೆಂಗಳೂರಿನಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಹಮ್ಮಿಕೊಂಡಿದ್ದ ಗುಬ್ಬಿವೀರಣ್ಣ ಭಾರತ ರಂಗಮಹೋತ್ಸವ ಕುರಿತ ಲೇಖನ.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರಿನಲ್ಲಿ ಹದಿನೈದು ದಿನಗಳ ಕಾಲ ನಡೆಸಿದ ಗುಬ್ಬಿ ವೀರಣ್ಣ ನೆನಪಿನ ಭಾರತ ರಂಗ ಮಹೋತ್ಸವ ಹತ್ತು ಹಲವು ಸಾಂಸ್ಕೃತಿಕ ಚರ್ಚೆಗಳಿಗೆ ಮಾರ್ಗ ತೋರುವಲ್ಲಿ ಸಫಲವಾಯಿತು.
ಪ್ರಾದೇಶಿಕ ರಂಗಭೂಮಿಯನ್ನು ನಿರ್ಲಕ್ಷಿಸುತ್ತಲೇ ಬಂದಿದ್ದ ಎನ್‌ಎಸ್‌ಡಿ ಇದೇ ಮೊದಲ ಬಾರಿಗೆ ದೆಹಲಿಯಿಂದ ಹೊರ ಭಾಗದಲ್ಲಿ ಉತ್ಸವ ಆಚರಿಸಿದ್ದು ಮಹತ್ವಪೂರ್ಣ. ಮುಖ್ಯವಾಗಿ ಉತ್ಸವದಲ್ಲಿ ‘ಕನ್ನಡ ರಂಗಭೂಮಿಯ ನವೋದಯ ಕಟ್ಟೋಣ’ ಎಂಬ ಚರ್ಚೆ ಹೆಗ್ಗೋಡಿನ ಪ್ರಸನ್ನ ಹುಟ್ಟು ಹಾಕಿದರು. ಅಷ್ಟೇ ಅಲ್ಲದೆ, ಸಾಂಸ್ಕೃತಿಕ ಮೂಲಸಾಮಗ್ರಿಯಾದ ರಂಗಭೂಮಿಯ ಪುನರ್ ನಿರ್ಮಾಣದ ಅಗತ್ಯತೆಯನ್ನು ಪ್ರತಿಪಾದಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಕನ್ನಡ ರಂಗಭೂಮಿಗೆ ಅಪಾಯ ಇರುವುದು ಜಾಗತೀಕರಣ, ಉದಾರೀಕರಣಗಳು ಸೃಷ್ಟಿಸುವ ಏಕಮುಖಿ ಸಂಸ್ಕೃತಿಯಿಂದ ಉದ್ಭವಿಸುವ ವಿಕೃತಿಯಿಂದ. ಇದಕ್ಕೆ ದೇಶಿ ಸಂಸ್ಕೃತಿಯ ವೈವಿಧ್ಯತೆಯ ಸಮರ್ಥ ಬಳಕೆ ಮಾತ್ರ ಪರಿಹಾರ ಎಂಬುದ ತೋರುವಲ್ಲಿ ನಾಟಕೋತ್ಸವ ಸಫಲವಾಯಿತು.
ಉತ್ಸವದಲ್ಲಿ ಪ್ರದರ್ಶನಗೊಂಡ ಬಹುಪಾಲು ನಾಟಕಗಳೂ ಆಯಾ ಪ್ರಾದೇಶಿಕತೆ, ಆಚರಣೆ, ಸಂಸ್ಕೃತಿಯನ್ನೇ ಹಿನ್ನಲೆಯಾಗಿಟ್ಟುಕೊಂಡು ನಿರ್ಮಾಣಗೊಂಡಿದ್ದವು. ಮುಂಬೈನ ವಾಮನ ಕೇಂದ್ರೆ ಅವರ ‘ಝುಲ್ವಾ’, ಇಂಫಾಲದ ರತನ್ ಥಿಯಾಂ ಅವರ ‘ನೈನ್ ಹಿಲ್ಸ್ ಒನ್ ವ್ಯಾಲಿ’, ಅಸ್ಸಾಂನ ಬಹುರುಲ್ ಇಸ್ಲಾಂ ಅವರ ‘ಅಪೇಕ್ಷಾ’, ಬಾಂಗ್ಲದ ಕಮಲುದ್ದೀನ್ ನೀಲು ಅವರ ‘ಸೊನಾಯ್‌ಬಿಬಿರ್ ಪಾಲ’, ಕೊಲ್ಕತ್ತಾದ ರುದ್ರಪ್ರಸಾದ್ ಸೇನ್‌ಗುಪ್ತಾ ಅವರ ‘ಗೋತ್ರಹೀನ್’, ಬೆಂಗಳೂರಿನ ರಂಗಶಂಕರ ತಂಡದ ‘ಒಡಕಲು ಬಿಂಬಗಳು’ ತಿರುವನಂತಪುರಂನ ಕೆ.ಎನ್. ಪಣಿಕ್ಕರ್ ಅವರ ತಂಡ ಪ್ರದರ್ಶಿಸಿದ ‘ಮಾಯಾ’, ರಂಗಾಯಣ ತಂಡ ಚಿದಂಬರರಾವ್ ಜಂಬೆ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ಅಪ್ಸರೆ’, ಮಣಿಪುರದ ‘ಹು ಆರ್ ವಿ’ ಉತ್ಸವದಲ್ಲಿ ಗಮನ ಸೆಳೆದ ಪ್ರಮುಖ ನಾಟಕಗಳು.
ವೈವಿಧ್ಯಮಯ ಕಥಾನಕಗಳ ಈ ನಾಟಕಗಳು ಆಯಾ ಪ್ರಾದೇಶಿಕ ಸಾಂಸ್ಕೃತಿಕ ಹಿರಿಮೆಯನ್ನು ಕಟ್ಟಿಕೊಟ್ಟವು. ಮಣಿಪುರದ ಸೌಂದರ್ಯ ಮತ್ತು ಅಲ್ಲಿನ ಜನತೆಯ ನೋವು ಒಂದು ಸಣ್ಣ ಜನಪದ ಕತೆಯ ಮೂಲಕ ಮೈದಾಳುತ್ತದೆ. ಬಾಂಗ್ಲಾದಲ್ಲಿನ ಸಾಂಪ್ರದಾಯಿಕ ಹಾಡು- ನೃತ್ಯಗಳ ಮೂಲಕ ಅಲ್ಲಿನ ಕೋಮುವಾದದ ಕರಾಳತೆ ಕಣ್ಮುಂದೆ ನಿಲ್ಲುತ್ತದೆ. ಹೀಗೆ ಒಂದೊಂದು ನಾಟಕ ಆಯಾ ಪ್ರದೇಶದ ಸಾಂಸ್ಕೃತಿಯನ್ನೇ ಕೇಂದ್ರವಾಗಿಟ್ಟುಕೊಂಡು ಜೀವಪಡೆದಿದ್ದವು.
ಅಂತಾರಾಷ್ಟ್ರೀಯ ಖ್ಯಾತಿಯ ತಂಡಗಳು ಮತ್ತು ನಿರ್ದೇಶಕರು ಪ್ರದರ್ಶಿಸಿದ ಈ ನಾಟಕಗಳ ರಂಗಭಾಷೆಯನ್ನು ಕನ್ನಡ ರಂಗಭೂಮಿಗೆ ಅನ್ವಯಿಸಿಕೊಳ್ಳಲು ಮತ್ತು ಸಾಗಬೇಕಾದ ಹಾದಿ ಕಂಡುಕೊಳ್ಳಲು ಉತ್ಸವ ನೆರವಾಯಿತು.
ಎಲ್ಲಾ ಚಳವಳಿಗಳೂ ನೆಲಕಂಡಿವೆ ಎಂಬ ಈ ಹೊತ್ತಿನಲ್ಲಿ ರಂಗಭೂಮಿ ಮಾತ್ರ ಮತ್ತೆ ಮೈಕೊಡವಿಕೊಂಡು ನಿಲ್ಲುತ್ತಿದೆ. ಅರವತ್ತರ ದಶಕದಲ್ಲಿ ಬೀಸಿದ ನವ್ಯದ ಗಾಳಿಯಿಂದ ರಂಗಭೂಮಿಯಲ್ಲೂ ಅಪಾರ ಪ್ರಯೋಗಳ ನಡೆದು ಯಶ ಕಂಡವು. ನವ್ಯದ ಹಾದಿಯಲ್ಲಿನ ನಾಟಕಕಾರರು ಬದುಕಿಗೆ ವಸ್ತು ನಿಷ್ಠರಾಗಿ ಸ್ಪಂದಿಸುತ್ತಾರೆ ಎಂಬುದೇ ಈ ಯಶಸ್ಸಿಗೆ ಮುಖ್ಯ ಕಾರಣವಾಯಿತು. ರಾಜಕೀಯ ರಂಗಭೂಮಿ ಹುಟ್ಟಿಕೊಂಡು ದಲಿತ, ರೈತ, ಬಡವರ ಕೇಂದ್ರಿತ ನಾಟಕಗಳೂ ಹುಟ್ಟಿಕೊಂಡು ಗಮನ ಸೆಳೆದವು. ನವ್ಯದ ಆಧುನಿಕ ಕನ್ನಡ ರಂಗಭೂಮಿಯಲ್ಲಿ ನವೋದಯದ ನಾಟಕಕಾರರು ಮೌನಕ್ಕೆ ಶರಣಾದರು.
ಸಾಮಾಜಿಕ ಬದುಕಿಗೆ ಇನ್ನೂ ಹತ್ತಿರವಾಗುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಬೀದಿ ನಾಟಕಗಳೂ ಕ್ರಮೇಣ ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತಿಗೆ, ರಾಜಕೀಯ ಪಕ್ಷಗಳಿಗೆ ಮತ ಕೇಳಲು ಬಳಕೆಯಾದವು. ಇಂಥ ಬೆಳವಣಿಗೆಗಳು ರಂಗಭೂಮಿ ಅಗತ್ಯವನ್ನೇ ಪ್ರಶ್ನಿಸಲು ಕಾರಣವಾದವು.
ಈ ಸಂದಿಗ್ಧ ಸಂದರ್ಭದಲ್ಲೇ ಸದ್ದಿಲ್ಲದೇ ಕನ್ನಡ ರಂಗಭೂಮಿಯ ನವೋದಯ ಆರಂಭವಾಗಿದೆ. ಎಂದಿಗಿಂತಲೂ ಹೆಚ್ಚು ಸೃಜನಶೀಲ ಯುವ ನಿರ್ದೇಶಕರು, ರಂಗಕರ್ಮಿಗಳು ಇಂದು ಕನ್ನಡ ರಂಗಭೂಮಿಯಲ್ಲಿ ದುಡಿಯುತ್ತಿದ್ದಾರೆ. ಕಾಲೇಜು ಮಟ್ಟದ ನಾಟಕ ಸ್ಪರ್ಧೆಗಳಲ್ಲೂ ಇಂದು ವೃತ್ತಿಪರತೆ ಎದ್ದು ಕಾಣುತ್ತಿದೆ. ಕನ್ನಡ ರಂಗಭೂಮಿ ನಡೆಯಬೇಕಾದ ಹಾದಿಯ ನಿರ್ದಿಷ್ಟ ಸ್ವರೂಪ ಪಡೆಯುತ್ತಿದೆ.
ಸಾಂಸ್ಕೃತಿಕ ಪ್ರಜ್ಞೆ ಚಿಗುರೊಡೆಯಲು ನೆರವಾಗುವ ರಂಗಭೂಮಿಯ ಬೆಳವಣಿಗೆಗೆ ಈ ನಾಟಕೋತ್ಸವ ನೀರೆದಿದೆ. ರಂಗಭೂಮಿ ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಿ ಗೆಲ್ಲುತ್ತಿರುವುದು ಆಯಾ ಕಾಲದಲ್ಲಿ ಗೋಚರವಾಗಿರುವ ಸತ್ಯ. ಇಂಥ ಸತ್ಯ ಈಗ ಮತ್ತೊಮ್ಮೆ ಗೋಚರವಾಗುತ್ತಿದೆ.
ರಂಗ ವ್ಯಾಕರಣದ ಕನಿಷ್ಠ ತಿಳಿವಳಿಕೆ ಇಲ್ಲದೆ ಒಂದೆರಡು ನಾಟಕಗಳೂ ಉತ್ಸವದಲ್ಲಿ ಪ್ರದರ್ಶನಗೊಂಡು ಅಚ್ಚರಿ ಮೂಡಿಸಿದವು. ಆದರೆ, ಇವು ನಮ್ಮ ಉನ್ನತ ಸ್ಥಾನವನ್ನೂ ತೋರಿದವು.

1 comment:

Anonymous said...

ನಾಟಕ ಅನ್ನೋದು ಟಾನಿಕ್ ಇದ್ದ ಹಾಗೆ. ನಾಟಕದಲ್ಲಿ 'ಆಕ್ಟೀವ್ ಇದ್ದಾಗ ದಿನಾಲು ಲವಲವಕಿ ಇತ್ತು. ಈಗ ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದೆ. ಬೆಂಗಳೂರಿನಲ್ಲೇನೂ ತಿಯೇಟ್ರ್ ಆಕ್ಟಿವಿಟಿ ಕಮ್ಮಿ ಇಲ್ಲಾ ಗುರೂ. ಆದ್ರೆ ನಂಗೆ ಟೈಮ್ ಇಲ್ಲ. ಬೆಂಗಳೂರಿನಲ್ಲಿ ಎಲ್ಲಕ್ಕಿಂತ ಟೈಂ ದುಬಾರಿ. ನೋಡೋಣ ಬರೋ ವರ್ಷ ಒಂದು ನಾಟಕ ಮಾಡೋಣ ಅಂತಿದ್ದೀನಿ. ಸತ್ಯ ಉಡುಪಿ

ಶಿವಮೊಗ್ಗ ರಂಗಾಯಣದಿಂದ ಹೊರಟ ರಂಗತೇರು

ಶಿವಮೊಗ್ಗ :   ರಂಗಾಯಣ   ರೆಪರ್ಟರಿ ವತಿಯಿಂದ ಜೂ. 7 ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ರಂಗಾಯಣದ ರಂಗತೇರಿನ ರಂಗಪಯಣ ಆರಂಭ ಗೊಂಡಿದೆ. ರಂಗಾಯಣ ನಿರ್ದೇಶಕ ಡಾ.ಎಂ.ಗಣ...