Friday, November 28, 2008

ಸಂಸ ನಾಟಕಗಳೆಂದರೆ ‘ಮನ್ದಮಾರುತನ ಖೇಲನಗಳು...’

ಎ.ವಿ. ಪಂಡಿತ್ ಆಲಿಯಾಸ್ ಸ್ವಾಮಿ, ವೆಂಕಟಾದ್ರಿ ಪಂಡಿತ್ ಅಂದರೆ ಯಾರಿವರು ಎಂದು ಹುಬ್ಬೇರುವುದು ಸಹಜ. ಆದರೆ, ‘ಸಂಸ’ ಎಂದರೆ ಸಾಕು ಸಾಹಿತ್ಯ, ನಾಟಕ ಪ್ರಿಯರ ಮುಖದಲ್ಲೊಂದು ಮುಗುಳ್ನಗೆ ಮೂಡುತ್ತದೆ.
ಕನ್ನಡ ಸಾಹಿತ್ಯ ಲೋಕ ಕಂಡರಿಯದ ವಿಕ್ಷಿಪ್ತ ಶೈಲಿ ರೂಢಿಸಿಕೊಂಡಿದ್ದ ಸಂಸ ಬದುಕಿದ್ದು ೪೧ ವರ್ಷ ಮಾತ್ರ. ಕೈಲಾಸಂ, ಶ್ರೀರಂಗರ ಸಮಕಾಲೀನರಾದ ಸಂಸರು ಲಭ್ಯವಿರುವ ನಾಟಕಗಳು ಕೇವಲ ಆರು (‘ಬಿರುದಂತೆಂಬರ ಗಂಡ’ ‘ಸುಗುಣ ಗಂಭೀರ’ ‘ಬೆಟ್ಟದ ಅರಸು’ ‘ವಿಗಡ ವಿಕ್ರಮರಾಯ’ ‘ಮಂತ್ರಶಕ್ತಿ’ ‘ವಿಜನನಾರಸಿಂಹ’).
ಆದರೆ, ಅವರು ಬರೆದದ್ದು ಒಟ್ಟು ೨೩ ನಾಟಕಗಳು. ಉಳಿದ ನಾಟಕಗಳು ಎಲ್ಲಿ ಹೋದವು ಎಂಬ ಪ್ರಶ್ನೆಗೆ ಇನ್ನೂ ಸಮರ್ಪಕ ಉತ್ತರ ದೊರೆತಿಲ್ಲ. ರಾಜ್ಯ ಮಟ್ಟದ ನಾಟಕ ಸ್ವರ್ಧೆಯಲ್ಲಿ ಸಂಸರ ಸುಗಣಗಂಭೀರ ನಾಟಕಕ್ಕೆ ಎರಡನೇ ಬಹುಮಾನ ಬಂತು‘ಸಂಸ’ . ಮೊದಲ ಬಹುಮಾನ ಟಿ.ಪಿ. ಕೈಲಾಸಂ ಅವರ ಟೊಳ್ಳುಗಟ್ಟಿ ನಾಟಕಕ್ಕೆ ದೊರೆಯಿತು.
ಸುಗುಣ ಗಂಭೀರ ನಾಟಕ- ತೊರೆಮಾವಿನಹಳ್ಳಿಯ ದುರ್ಗೇಶ್ವರನ ಮಗನು ಪರಪತ್ನಿಯನ್ನು ಕಾಮಿಸಿ, ಆ ಕಾಮದಿಂದ ಆಕೆಯ ಪತಿಯನ್ನು ಕೊಲೆ ಮಾಡಿ, ಅದರ ಪರಿಣಾಮವಾಗಿ, ಅವನ ತಂಗಿಯ ಪ್ರೇಮ ಜೀವನ ನಾಶವಾದದ್ದು, ಅಲ್ಲದೆ, ತೊರೆಮಾವಿನಹಳ್ಳಿಯವರನ್ನು ಮೈಸೂರಿನ ಅರಸರು ಸೋಲಿಸಿ, ಅವರಿಂದ ‘ಸುಗುಣಗಂಭೀರ’ ಎಂಬ ಬಿರುದನ್ನು ಸಂಪಾದಿಸಿಕೊಂಡದ್ದು- ಇಲ್ಲಿಯ ಕತೆ.
ನಾಟಕದ ಒಂದು ದೃಶ್ಯದಲ್ಲಿ.....
ವೃದ್ಧಮನ್ತ್ರಿ: ಮಹಾರಾಜ, ಶರತ್ಕಾಲದ ಸುನೀಲಮ ಗಗನದಲ್ಲಿ ಶುದ್ಧ ಸ್ಫಟಿಕದಂತಹ ಮೇಘಕಲಶಗಳು ಸಕ್ಷತ್ರಕಾನ್ತಿಯಲ್ಲಿ ಕ್ರೀಡಿಸುತ್ತ ಮನ್ದಮಾರುತನ ಖೇಲನಗಳನ್ನು ಪ್ರದರ್‍ಶಿಸುತ್ತಿರುವವು.
ಮಹಾರಾಜ: ॥ಅಹುದು...ಆರ್‍ಯ; ವಿಶ್ವಸೃಷ್ಟಿಯ ಈ ಪವಿತ್ರ ಶಾನ್ತಿಯು ನಮಗೆ ಜೋಗುಳ ಹಾಡುತ್ತಿರುವುದಾದರೂ, ಅದರಲ್ಲಿಯ ಸಾರಪರಮಸ್ಥಿತಿಯನ್ನು ಬಣ್ಣಿಸಿಕೊಡುವ ಪುಣ್ಯ ಆರಿಗೂ ಇಲ್ಲ.... ವೃದ್ಧಮನ್ತ್ರಿ: ಮಹಾರಾಜ॥ ಹೀಗಿದ್ದರೂ, ಆವ ಗಳಿಗೆಯಲ್ಲಿ ಮಳೆಗರೆದು, ಈ ತೊರೆಯಲ್ಲಿ ಪ್ರವಾಹವೇರಿ, ಅಗಳಲ್ಲಿ ನಾವು ಮುಚ್ಚಿರುವೆಡೆಗಳನ್ನು ಮುಳುಕಿಸಿ ಕರಗಿಸಿಕೊಣ್ಡು ಹೋಗಬಹುದೆಂಬುದನ್ನು ನಿಶ್ಚಯಿಸಲಾಗುವಂತಿಲ್ಲ...



ಹೀಗೆ ಸಂಸರು ಭಾಷೆಯನ್ನು ಶ್ರೀಮನ್ತ ಮಾಡುತ್ತಾರೆ. ಅದೂ ಕೇವಲ ೨೧ನೇ ವರ್ಷದಲ್ಲೇ ಇಂಥ ಭಾಷಾ ಪ್ರೌಢಿಮೆ. ಈ ಕೃತಿಗಳಲ್ಲಿರುವ ಭಾಷೆಯಷ್ಟೇ ಅವರ ಬದುಕೂ ಸಹ ವರ್ಣರಂಜಿತ, ನಾಟಕದಂತೆ ರಹಸ್ಯಮಯ.
ಒಟ್ಟಿನಲ್ಲಿ ಹೇಳುವುದಾದರೆ, ಸಂಸ ಕನ್ನಡ ಸಾಹಿತ್ಯ ಲೋಕಕ್ಕೊಂದು ಒಗಟು. ಸ್ವತಂತ್ರ್ಯ ಪೂರ್ವದಲ್ಲೇ ಅವರು ಈಜಿಪ್ಟ್‌ಗೆ ಹೋಗಿದ್ದರು, ಅಫಘಾನಿಸ್ತಾನಕ್ಕೆ ಹೋಗಲು ಅನುಮತಿ ಪಡೆದಿದ್ದರು, ದಕ್ಷಿಣ ಅಫ್ರಿಕಾದ ಡರ್ಬಾನಲ್ಲಿ ಕೂಲಿ ಕೆಲಸ ಮಾಡಿದರು, ಒಮ್ಮೆ ಕ್ರಿಶ್ಚಿಯನ್ ಮತ ಸೇರಲು ಯತ್ನಿಸಿ ತಮ್ಮ ನಾಟಕಗಳನ್ನು ಒಬ್ಬ ಪಾದ್ರಿಯ ಬಳಿ ಅಡವಿಟ್ಟರು. ಬೌದ್ಧ ಭಿಕ್ಷುವಾಗಲು ಟಿಬೆಟ್‌ಗೆ ತೆರಳಿದ್ದರು, ಬಂಗಾಳದ ಕ್ರಾಂತಿಕಾರಿ ಪಂಗಡದೊಂದಿಗೆ ಸಂಪರ್ಕ ಇಟ್ಟಕೊಂಡಿದ್ದರು- ಹೀಗೆ ಹತ್ತಾರುವ ಊಹಾಪೋಹಗಳಿಗೆ ಆಸ್ಪದವಾದವರು ಸಂಸರು.
ಇಷ್ಟೇಲ್ಲ ವರ್ಣರಂಜಿತ, ನಿಗೂಢಕತೆಗಳನ್ನು ತಮ್ಮ ಬದುಕಿನೊಂದಿಗೆ ತಳಕು ಹಾಕಿಕೊಂಡ ಇನ್ನೊಬ್ಬ ಸಾಹಿತಿ ನಮ್ಮಲ್ಲಿ ಇಲ್ಲ.
ಸಂಸರ ಒಂದು ನಾಟಕ ಮೈಸೂರು ಅರಮನೆಯಲ್ಲಿ ಪ್ರದರ್ಶನವಾಯಿತು. ನಾಟಕವನ್ನು ಮೆಚ್ಚಿದ ಅರಸರು ನಾಟಕ ಕರ್ತ ಸಂಸರು ವೇದಿಕೆ ಮೇಲೆ ಬರಬೇಕು ಎಂದು ಕರೆದಾಗ ಸಂಸರು- play is The thingಎಂದು ಹೇಳಿ ಅಲ್ಲಿಂದ ನಾಪತ್ತೆಯಾಗಿದ್ದರು. ಹೀಗೆ ಹತ್ತಾರು ವರ್ಣರಂಜಿತ ಕತೆಗಳು ಕೇಳುತ್ತಲೇ ಇರುತ್ತವೆ. ಕತೆಗಳು- ಉಪಕತೆಗಳು ಹೆಚ್ಚುತ್ತಲೇ ಇವೆ. ಇವು ಹೆಚ್ಚಿದಷ್ಟು ಸಂಸರ ಬದುಕು ಇನ್ನಷ್ಟು ನಿಗೂಢವಾಗುತ್ತದೆ.
ಸಂಸರ ಅಷ್ಟೂ ಐತಿಹಾಸಕ ನಾಟಕಗಳಲ್ಲಿ ಸಮಕಾಲೀನ ಪ್ರಜ್ಞೆ ಎದ್ದು ಕಾಣುತ್ತದೆ. ಅರಮನೆ, ಅಧಿಕಾರಕ್ಕಾಗಿ ನಡೆಯುವ ಪೈಪೋಟಿ, ಕುಂತತ್ರಗಳು, ಒಳಜಗಳಗಳು, ಗಂಡು- ಹೆಣ್ಣಿನ ಸಂಬಂಧಗಳು ಮುಂತಾದವನ್ನು ಇಂದಿನ ರಾಜಕೀಯದಲ್ಲೂ ಕಾಣಬಹುದು. ಸಂಸರ ರಣಧೀರನಂತ ಉದಾತ್ತರು, ಕುರುವಿಯನ್, ವಿಗಡ ವಿಕ್ರಮರಾಯನಂತ ದುಷ್ಟರು ಇಂದಿಗೂ ಇದ್ದಾರೆ- ನಮ್ಮ ನಡುವೆ. ಈ ಕಾರಣಕ್ಕಾಗಿಯೇ ಸಂಸರ ನಾಟಕಗಳು ಇನ್ನು ಉಳಿದಿರುವುದು.

1 comment:

Anonymous said...

it' fine
channagide,innstu lekhana bariri
suresh

ಶಿವಮೊಗ್ಗ ರಂಗಾಯಣದಿಂದ ಹೊರಟ ರಂಗತೇರು

ಶಿವಮೊಗ್ಗ :   ರಂಗಾಯಣ   ರೆಪರ್ಟರಿ ವತಿಯಿಂದ ಜೂ. 7 ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ರಂಗಾಯಣದ ರಂಗತೇರಿನ ರಂಗಪಯಣ ಆರಂಭ ಗೊಂಡಿದೆ. ರಂಗಾಯಣ ನಿರ್ದೇಶಕ ಡಾ.ಎಂ.ಗಣ...