Tuesday, March 26, 2019

ಕ್ಯೂಬಾದ ಕಾರ್ಲೋಸ್ ಸೆಲ್ಡ್ರಾನ್ ಅವರ ವಿಶ್ವರಂಗದಿನದ ಸಂದೇಶ-2019




ವಿಶ್ವರಂಗ ದಿನವನ್ನು 1962ರಿಂದ ಪ್ರತೀ ಮಾರ್ಚ್ 27ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. 2019ರ ವಿಶ್ವರಂಗದಿನಕ್ಕಾಗಿ ಕ್ಯೂಬಾದ ರಂಗಕರ್ಮಿ, ನಾಟಕಕಾರ ಮತ್ತು ರಂಗ ಶಿಕ್ಷಕ ಕಾರ್ಲೋಸ್ ಸೆಲ್ಡ್ರಾನ್  ಅವರ ಸಂದೇಶ ಆರಿಸಿಕೊಳ್ಳಲಾಗಿದೆ.

 ಕ್ಯೂಬಾದ ಕಾರ್ಲೋಸ್ ಸೆಲ್ಡ್ರಾನ್ ಅವರ ವಿಶ್ವರಂಗದಿನದ ಸಂದೇಶ-2019
ರಂಗಭೂಮಿಯಲ್ಲಿ ನಾನು ಕಣ್ಣು ಬಿಡುವುದಕ್ಕೂ ಮೊದಲೇ ಇಲ್ಲಿ ನನ್ನ ಗುರುಗಳು ಇದ್ದರು. ಆ ಗುರುಗಳು ತಮ್ಮ ಬದುಕಿನ ಅನುಭವಗಳನ್ನು ಆಧರಿಸಿ ತಮ್ಮದೇ ರಂಗ ಕಾವ್ಯವನ್ನು ವೇದಿಕೆ ಮೇಲೆ ಇರಿಸಿದರು. ಅವರಲ್ಲಿ ಅನೇಕರು ಇಂದು ಅನಾಮಿಕರಾಗಿರಬಹುದು,  ಅಥವಾ ನೆನಪಿನ ಕಣಜಕ್ಕೆ ಸೇರಿಲ್ಲದೆಯೂ ಇರಬಹುದು. ಆದರೆ, ಆ ಗುರುಗಳು- ಸದ್ದಿಲ್ಲದೆ, ತಾಲೀಮಿನ ಮನೆಯ ವಿನಯದ ಸಹಾಯದಿಂದ ತುಂಬಿದ ರಂಗಗೃಹದಲ್ಲಿ ಪ್ರೇಕ್ಷಕರ ಎದುರು ಹಲವಾರು ಕೃತಿಗಳನ್ನು ವರ್ಷಾನುವರ್ಷ ಕಟ್ಟಿ, ಅಪರೂಪವೆನಿಸುವ ಅನುಭೂತಿ ಸೃಷ್ಟಿಸಿ, ತೆರೆಯ ಮರೆಗೆ ಸರಿದವರು. ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಆಯಾ ರಂಗ ಕ್ಷಣವನ್ನು ಜೀವಂತವಾಗಿಸಿ ಜನಮೆಚ್ಚಿದ ಪರಂಪರೆಯೊಂದನ್ನು ಉಳಿಸಿದವರು ನನ್ನ ಗುರುಗಳು. ಮತ್ತೆ ಪುನರಾವರ್ತಿಸಲು ಆಗದಂತಹ  ರಂಗಕ್ಷಣವನ್ನು ಸೃಷ್ಟಿಸುತ್ತ,  ರಂಗದಲ್ಲಿ ಆಯಾ ಕ್ಷಣವು ಮತ್ತೊಂದು ಕ್ಷಣದ ಜೊತೆಗೆ ಸೇರುವಂತೆ ಕಟ್ಟಿದವರು. ಆ ಕ್ಷಣ ನಿಜ ಎಂಬುದನ್ನು ಯಾವ ರಕ್ಷಣೆಯ ಚಿಂತೆ ಇಲ್ಲದೆ, ಆಗಾಗಲೇ ಹುಟ್ಟಿದ ಆಂಗಿಕಗಳ ಮೂಲಕ, ಗಲೇ ಹೊರಬೀಳುವ ಶಬ್ದಗಳ ಮೂಲಕ ಅನುಭವಗಳ ಮಾಲೆಯನ್ನು ದಾಟಿಸಿದವರು ನನ್ನ ಗುರುಗಳು. ಆಗಲೇ ನನ್ನ ಗುರುಗಳು ನಡೆದ ಹಾದಿಯಲ್ಲಿ ನಡೆಯುವುದೇ ನನ್ನ ಬದುಕಿನ ಹಾದಿ ಸಹ ಎಂಬುದು ನನ್ನ ಅರಿವಿಗೆ ಬಂತು.
        ಪ್ರತಿನಿತ್ಯ ಪ್ರದರ್ಶನ ಮಂದಿರಕ್ಕೆ ಭೇಟಿ ಕೊಡುವ ಸಮಾಜದ ತರಹೇವಾರಿ ವರ್ಗದ ಪ್ರೇಕ್ಷಕ ಬಂಧುಗಳು ತಮ್ಮ ಬದುಕಿನ ಕೆಲ ಕಾಲವನ್ನು ಕಲಾವಿದರೊಂದಿಗೆ ಹಂಚಿಕೊಳ್ಳುವ ಅದೇ ಜಾಗವೇ ನನ್ನ ರಂಗಮನೆ. ನನ್ನಂತಹವರ ಜೀವನವು ಸಹ- ನಾನು ನಾನಾಗಿಲ್ಲದ ಆ ಕ್ಷಣಗಳಲ್ಲಿ, ನನಗಾಗಿ ನಾನೇ ಕೊಟ್ಟುಕೊಳ್ಳುವ ಸಂಕಟಗಳಲ್ಲಿ, ಮತ್ತೆ ಮತ್ತೆ ಹುಟ್ಟುತ್ತಾ ರಂಗಭೂಮಿ ಎಂಬ ವೃತ್ತಿಯ ಬಗ್ಗೆ ತಿಳುವಳಿಕೆ ನೀಡುತ್ತಾ ಇರುತ್ತದೆ. ಅವು ಅರೆಗಳಿಗೆ ಬೆಳಗುವ ಸತ್ಯಗಳು, ಕಲಾವಿದನಿಗೆ ಅದಾಗಲೇ ಗೊತ್ತಿರುವ ಮಾತು ಹಾಗೂ ಚಲನೆಯ ಮೂಲಕ ರಂಗದ ಮೇಲೆ ಅರಳುವ ನೆರಳು ಬೆಳಕಿಲ್ಲಿ ಮೂಡುವ ಪ್ರಬುದ್ಧವೂ, ತೀರಾ ವೈಯಕ್ತಿಕವೂ ಆದ ಬದುಕಿನ ಅನುಭವ ಅದು. ನನ್ನನ್ನೂ ಒಳಗೊಂಡಂತೆ ನನ್ನ ತಂಡದ ಎಲ್ಲ ಕಲಾವಿದರು ಸೇರಿ ಸೃಷ್ಠಿಸಿದ ಇಂಥ ವಿಶಿಷ್ಟ ಕ್ಷಣಗಳಿಂದ ಕಟ್ಟಿದ ರಂಗದೇಶ ಅದು. ಮುಖವಾಡಗಳನ್ನು ತೊಟ್ಟು, ನಾವ್ಯಾರು ಎಂಬುದನ್ನು ಬಿಟ್ಟುಕೊಡಲಾಗದ ಆತಂಕದಲ್ಲಿ ಯಾರದೊ ಮಾತುಗಳನ್ನು ಆಡುತ್ತಾ ಕತ್ತಲಿನಲ್ಲಿ ಕೈಕೈ ಹಿಡಿಯುವ ಅವಕಾಶ ಇದು.
ರಂಗ ಪರಂಪರೆ ಎಂಬುದು ಸರಳ ರೇಖೆಯಂತೆ. ಈ ಸರಳ ರೇಖೆಯ ಕೇಂದ್ರ ಅಥವಾ ಆರಂಭ ಇಂತಲ್ಲಿಯೇ ಆಯಿತೆಂದು ಯಾರೂ ಹೇಳಲಾಗದು. ರಂಗಭೂಮಿ ಎಂಬುದು ನನ್ನ ಗ್ರಹಿಕೆಗೆ ಸಿಕ್ಕಿರುವಂತೆ, ಹಲವು ಕಲಾವಿದರ ಪ್ರದರ್ಶನ ಹಾಗೂ ರಂಗತಂತ್ರಗಳ ಮೇಳೈಕೆಯಿಂದ ಒಗ್ಗೂಡಿರುವ ಕಣ್ಣಿಗೆ ಕಾಣಿಸದ, ಆದರೆ, ಅಸ್ತಿತ್ವದಲ್ಲಿ ಇರುವ ಭೂಪಟವಿದೆ ಈ ರಂಗಭೂಮಿಗೆ.  ಎಲ್ಲಾ ರಂಗದಿಗ್ಗಜರು ಸಹ ಮತ್ತೆ ಪುನಾರಾವರ್ತಿಸಲಾಗದ ಸುಂದರ ಕ್ಷಣಗಳನ್ನು ನೀಡುತ್ತಾ ತಮ್ಮ ಕಲೆಯನ್ನು ಕಾಪಾಡುವ ಅಥವಾ ಶಾಶ್ವತಗೊಳಿಸುವ ಚಿಂತೆಯಿಲ್ಲದೆ ಮರೆಗೆ ಸರಿದಿದ್ದಾರೆ. ನಿರಂತರವಾಗಿ ಸತ್ಯದ ಕ್ಷಣಗಳನ್ನು, ಅನುಮಾನ ಕ್ಷಣಗಳನ್ನು ದುರಿತ ಕಾಲದಲ್ಲಿ ಶಕ್ತಿ ಮತ್ತು ಸ್ವಾತಂತ್ರ್ಯದ ಕ್ಷಣಗಳನ್ನು ಸೃಷ್ಟಿಸುವುದೇ ಈ ವೃತ್ತಿಯ ಬೇರು ಎಂಬ ಸತ್ಯದ ಅರಿವು ಎಲ್ಲಾ ರಂಗ ಗುರುಗಳಿಗೂ ಇರುತ್ತದೆ. ಅವರೇನು ಮಾಡಿದ್ದಾರೆ ಎಂಬುದು ನಾಳೆಗೆ ಉಳಿಯುವುದಿಲ್ಲ. ಉಳಿಯುವುದು ಕೆಲವು ಹಳೆಯ ಚಿತ್ರಗಳು ಮತ್ತು ವಿಡಿಯೋಗಳು ಸಹ ಅಂದಿನ ಆ ಕ್ಷಣವನ್ನು ಮರುಸೃಷ್ಠಿಸಲಾಗದ ಪೇಲವ ದಾಖಲೆಗಳಷ್ಟೇ. ಆ ದಾಖಲೆಗಳಲ್ಲಿ ಯಾವತ್ತಿಗೂ ಸಿಗದ ಅಂಶವೆಂದರೆ  ರಂಗಕೃತಿಗಳನ್ನು ನೋಡಿದ ಪ್ರೇಕ್ಷಕರ  ಅನುಭಾವಿ ಮೌನ. ತಮಗೆ ಆಯಾ ಪ್ರದರ್ಶನದಲ್ಲಿ ದಕ್ಕಿದ್ದು ಮತ್ತೆಂದೂ ಯಾರಿಗೂ ಸಿಗದ ಅಪರೂಪದ ಕ್ಷಣಗಳೆಂಬುದು, ಅಪರೂಪದ ಜೀವನಾನುಭವ ಎಂಬುದು ಮತ್ತು ಅದು ಅತ್ಯಂತ ಸೂಕ್ಷ್ಮವಾದ ನೆನಪು ಎಂಬುದು ಆ ಪ್ರೇಕ್ಷಕರಿಗೆ ಖಂಡಿತಾ ಗೊತ್ತು.
ರಂಗಭೂಮಿ ಎಂಬುದು ಜಗತ್ತನ್ನೇ ಆವರಿಸಿಕೊಂಡಿರುವ ಸ್ವತಂತ್ರ ದೇಶ. ಈ ಸತ್ಯ ನನಗೆ ತಿಳಿದ ಗಳಿಗೆಯಲ್ಲಿಯೇ ನನ್ನೊಳಗೊಂದು ನಿರ್ಧಾರ ಮೂಡಿತು. ಅದು ಬಿಡುಗಡೆ ದೊರೆವ ಅನುಭವ. ಅದಕ್ಕಾಗಿ ದೂರ ಪಯಣದ ಅಗತ್ಯವಿಲ್ಲ. ನೀವಿರುವ ತಾಣ ಬಿಡಬೇಕಾಗಿಲ್ಲ, ಎಲ್ಲಿಂದೆಲ್ಲಿಗೋ ಓಡಬೇಕಾಗಿಲ್ಲ. ನೀವಿರುವ  ಜಾಗ ಸಾರ್ವಜನಿಕವೂ ಹೌದು. ನಿಮಗೆ ಬೇಕಾದಂತಹ ತಂಡ ನಿಮ್ಮ ಜೊತೆಗೆ ಇದ್ದೇ ಇರುತ್ತದೆ. ಅಲ್ಲಿ ನಿಮ್ಮ ಮನೆಯ ನೆರೆಹೊರೆಯಲ್ಲಿಯೇ ಬದುಕಿನ ವಾಸ್ತವ ಇರುತ್ತದೆ. ನೀವು ಅದೇ ಜಾಗದಲ್ಲಿ ಹಿಂದೆಂದೂ ಕಂಡಿರದ ಅಪರೂಪದ ರಂಗಪಯಣವೊಂದನ್ನು ರೂಪಿಸುತ್ತೀರಿ. ಆ ಮಹಾಕಾವ್ಯದಂತಿರುವ ಪಯಣ ರೂಪಿಸುವುದಕ್ಕೆ ನೀವು ಚಲಿಸದೆಯೇ ಪಯಣಿಗರಾಗುತ್ತೀರಿ. ನಿಮ್ಮ ಸುತ್ತಲ ಬದಲಾಗದ ಬದುಕಿನ ಒತ್ತಡಗಳನ್ನು ಅದರ ವೇಗದಲ್ಲಿಯೇ ರಂಗದ ಮೇಲೆ ಬರುವಂತೆ ಕಟ್ಟುತ್ತೀರಿ. ನಿಮ್ಮ ಪಯಣವು ತತ್ ಕ್ಷಣದ ಕಡೆಗಿನದು. ನಿಮ್ಮ ಪೂರ್ವಸೂರಿಗಳು ಕಟ್ಟಿಹೋದ ಮಾಯಕ ಕ್ಷಣಗಳ ಹಾಗೆ ನಿಮ್ಮದೇ ಆದ ಕ್ಷಣ ಸೃಷ್ಟಿಸುತ್ತೀರಿ. ನಿಮ್ಮ ಪಯಣ  ಹೃದಯಗಳ ಕಡೆಗೆ, ಅವರೆಲ್ಲೂ ಸೃಷ್ಟಿಸಿದ ಅಧೇ ವಸ್ತುವಿನ ಕಡೆಗೆ, ನೀವು ಅವರೊಂದಿಗೆ ಅದೇ ಭಾವದಲ್ಲಿ, ಅವರ ನೆನಪುಗಳನ್ನು ಮರುಸೃಷ್ಟಿಸುವ, ಮತ್ತೆ ಚಲನೆಗೆ ತರುವ ಕಡೆಗೆ ಪಯಣ ಮಾಡುತ್ತೀರಿ. ನಿಮ್ಮ ಪಯಣ ಅದೆಷ್ಟು ಎತ್ತರದ್ದೆಂದರೆ  ಮತ್ತ್ಯಾರೂ ಅದನ್ನು ಅಳೆಯಲಾಗದು, ಅದರ ಸದ್ದಡಗಿಸಲಾಗದು, ಯಾರೂ ಅದನ್ನು ಸರಿಯಾದ ಕ್ರಮದಲ್ಲಿ ಗುರುತಿಸದೆಯೂ ಇರಬಹುದು. ಆದರೆ, ಆ ಪಯಣವು ಜನ ಕಲ್ಪನಾ ಜಗತ್ತಿನಲ್ಲಿ  ವಿಹರಿಸುವ ಪಯಣ.  ಆ ಕಲ್ಪನೆಯ ಬೀಜವನ್ನು ಯಾವುದು ತಿಳಿಯ ಮೂಲೆಗಳಲ್ಲಿ,  ಯಾವುದು ನಾಗರಿಕತೆಗಳು, ಅದರ ನೈತಿಕ ನಿಲವುಗಳು ನಿಮ್ಮ ಪ್ರೇಕ್ಷಕರ ಎದೆಯೊಳಗೆ ಬಿತ್ತಿರುತ್ತವೆ. ಈ ಕಾರಣಕ್ಕಾಗಿಯೇ ನಾನು ಚಲಿಸುವುದಿಲ್ಲ. ನನ್ನ ನೆಲದಲ್ಲಿಯೇ ಇರುತ್ತೇನೆ. ನನ್ನ ಆತ್ಮೀಯ ಬಂಧುಗಳ ಜೊತೆಗೆ ಇರುತ್ತೇನೆ. ಹಾಗಾಗಿಯೇ ಹಗಲು-ರಾತ್ರಿಗಳ ಲೆಕ್ಕವಿಲ್ಲದೆ ದುಡಿಯುತ್ತಾ ಒಂದೆಡೆ ಸ್ಥಿರವಾಗಿದ್ದರೂ ನನಗೆ ವೇಗದ ಗುಟ್ಟೇನು ಎಂಬುದು ತಿಳಿಯುತ್ತದೆ.

ಕೃಪೆ: ಮೂಲ ಸ್ಪೇನ್ ಭಾಷೆಯ ಇಂಗ್ಲಿಷ್ ಅನುವಾದ ದಿಂದ ಕನ್ನಡಕ್ಕೆ: ಬಿ ಸುರೇಶ್
ಧನ್ಯವಾದಗಳು: ನಟನಾ ರಂಗಶಾಲೆ

ಚಿತ್ರಗಳು- ಇಂಟರ್ ನೆಟ್

No comments:

ಶಿವಮೊಗ್ಗ ರಂಗಾಯಣದಿಂದ ಹೊರಟ ರಂಗತೇರು

ಶಿವಮೊಗ್ಗ :   ರಂಗಾಯಣ   ರೆಪರ್ಟರಿ ವತಿಯಿಂದ ಜೂ. 7 ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ರಂಗಾಯಣದ ರಂಗತೇರಿನ ರಂಗಪಯಣ ಆರಂಭ ಗೊಂಡಿದೆ. ರಂಗಾಯಣ ನಿರ್ದೇಶಕ ಡಾ.ಎಂ.ಗಣ...